Friday, November 30, 2012

{ನುಡಿ} ಮುತ್ತು 36


ಅನ್ಯರನು ನಿಂದಿಸುವ
ನಿಂದನೆಯಲೇ ನಗುವ
ಪರಪಮ ಪಾಪಿಯು ನಾನಾದರೂ ಸರಿಯೇ
ಶಿಕ್ಷಿಸದೇ ಬಿಡದಿರು ಮಲ್ಲಿಕಾರ್ಜುನ.

Thursday, November 29, 2012

{ನುಡಿ} ಮುತ್ತು 35

ಗತಿಸಿದಾ ಕಾಲದಲಿ
ಚಿನ್ನ ಹೊನ್ನಿನ ಹೊಳೆಯು
ಬೆರಗು ಬಿನ್ನರ ಕಳೆಯು
ಮರೆವು ಮಾಸೆಂದರೆ
ಹೇಗೆ ಮರೆವರಯ್ಯಾ ಹೇಳು ?
ಅಧಿಕಾರವೆಂಬುದು
ಅಮಲಿನ ಗಡಿಗೆಯಂತೆ.

{ನುಡಿ} ಮುತ್ತು 34

ನಾನು ನಾನೆಂಬೆನೆ
ನನದು ನನದೆಂಬೆನೆ
ನನ್ನದೇನಿಹದಯ್ಯ ಮಲ್ಲಿಕಾರ್ಜುನ
ನಿನ್ನ ಸನ್ನಿದಿಯೊಳು.

Monday, November 26, 2012

{ನುಡಿ} ಮುತ್ತು 33

ಎನಗುಂಟು ಸಾಮ್ರಾಜ್ಯ, ಎನಗುಂಟು ಐಶ್ವರ್ಯ,
ಎನಗುಂಟು ಕೋಟೆ ಕೊತ್ತಲಗಳು
ಏನಿದ್ದರೇನಯ್ಯಾ ಮಲ್ಲಿಕಾರ್ಜುನ
ಮನದೊಳು ಭಕ್ತಿಯೆಂಬ ದೀಪ ಉರಿಯದೊಡೆ.

{ನುಡಿ} ಮುತ್ತು 32

ಎತ್ತಣ ಲಾಲಸೆ, ಎತ್ತಣ ಗಾಂಭೀರ್ಯ
ಎತ್ತಣದಿಂದ್ ಎತ್ತಣ
ಪರಿಹಾಸವಯ್ಯ ಮಲ್ಲಿಕಾರ್ಜುನ

Friday, August 17, 2012

{ನುಡಿ} ಮುತ್ತು 31

ಹಸಿದವನಿಗೆ ಅನ್ನದಮೇಲಕ್ಕರೆ
ಹಸಿವರಿಯದವನಿಗೆ ಚಿನ್ನದಮೇಲಕ್ಕರೆ
ಹಸಿವಿಲ್ಲದವನಿಗೆ ಜ್ಞಾನದಮೇಲಕ್ಕರೆ
ನನಗೂ ಇಹದಯ್ಯಾ ಮಲ್ಲಿಕಾರ್ಜುನ
ನಿನ್ನ ಭಜಿಸುವಂತ ಮಹದಕ್ಕರೆ

Sunday, August 12, 2012

{ನುಡಿ} ಮುತ್ತು 30

ನಗುವನ್ನು ಇಂದು ದುಡ್ಡಿನಿಂದ ಕೊಳ್ಳಬೇಕು
ಅಳುವಂತವರನ್ನು ಸಂತೈಸುವರ್ಯಾರಯ್ಯ
ಮಮತೆ ವಾತ್ಸಲ್ಯವೆಂದೋ ಮಣ್ಣಾಗಿ ಹೋಗಿಹದು
ಇನ್ನು ತಿಳಿಯದವರ ಪಾಡೇನಯ್ಯಾ ಮಲ್ಲಿಕಾರ್ಜುನ

Monday, July 2, 2012

{ನುಡಿ} ಮುತ್ತು 29

ಮನಸ್ಸೆಂಬುದು ನೂರಾರು ಚಿಂತೆಗಳೊಳು ಮುಳುಗಿ
ಸಾವರಿಸಿಕೊಳ್ಳುವಂತ ವೇಳೆಯಲ್ಲಿ.
ಅಪ್ಸರೆಯ ನಾಟ್ಯವೆಂಬುದು ಸಹ
ನೋವಿನ ಉಯ್ಯಾಲೆಯನ್ನೇರಿ ತೂಗಾಡಿದಂತ
ಭಾವ ಮೂಡುವುದಯ್ಯಾ ಮಲ್ಲಿಕಾರ್ಜುನ..

Wednesday, June 27, 2012

ನೋವು, ನಲಿವು

ಅತಿಯಾಗಿ ನೋವಾದಾಗ ಕಾವ್ಯವನ್ನು ರಚಿಸಬಹುದು ಕಥೆಗಳನ್ನು ಬರೆಯಬಹುದು ವೃತ್ತಾಂತಗಳನ್ನೇ ಹೆಣೆಯಬಹದುದು ಅದರಂತೆ ಅತಿಯಾದ ಸಂತಸವಿದ್ದಾಗ ಇವೆಲ್ಲವನ್ನೂ ಮರೆತು ಸುಮ್ಮನಿದ್ದು ಬಿಡಬಹುದು..

ಸುಳ್ಳು ಮತ್ತು ಸತ್ಯ

ಕೆಲವರು ಸುಳ್ಳನ್ನು ಪ್ರೀತಿಸುತ್ತಾರೆ ಅದರಂತೆ ಸತ್ಯವನ್ನೂ ಸಹ. ಸುಳ್ಳು ಕ್ಷಣಿಕಕ್ಕೆ ಅಪ್ಸರೆಯಂತೆ ಅನಾವರಣಗೊಂಡರೂ ಸತ್ಯವೆಂಬುದು ಸತಿಯಂತೆ ಜೀವನದುದ್ದಕ್ಕೂ ಅವನ ಕೈಹಿಡಿದು ನಡೆಸುತ್ತೆ..

ಸತ್ವ

ದೈವವೆಂಬ ಸತ್ವ ಕೆಲವರಿಗೆ ಕಲ್ಲಂತೆ, ಹಣದಂತೆ, ಅಧಿಕಾರದಂತೆ ಹಾಗೇಯೇ ಬಗ್ಗು ಬಡಿಯುವ ರಾಕ್ಷಸನಂತೆ ಗೋಚರವಾಗುತ್ತೆ. ಆದರಂತೆ ಈ ಕಾಣದ ಶಕ್ತಿಯ ಬಗ್ಗೆ ಒಂದೂ ಕುತೂಹಲವಂತೂ ಎಲ್ಲರಲ್ಲೂ ಉಳಿದುಹೋಗುತ್ತೆ.

ನಗುತ್ತಿರುತ್ತಾರೆ

ಕೆಲವರು ಎಲ್ಲರಿಗೂ ಧೈರ್ಯ ಹೇಳುತ್ತಾರೆ. ಕೈಲಾದ ಸಹಾಯವನ್ನು ಮಾಡುತ್ತಾರೆ. ಮತ್ತೊಬ್ಬರ ಜೀವನದ ದಿಕ್ಕನ್ನು ಬದಲಿಸಲು ತೀರ ಶ್ರಮಿಸುತ್ತಾರೆ. ಅದರೆ ತಮ್ಮ ಬದುಕಿನ ಬವಣೆಗಳನ್ನು ಯಾರಲ್ಲೂ ಹೇಳಲಾಗದೇ ತಮ್ಮೊಳಗೆ ತಾವೇ ಕೊರಗುತ್ತ ಇತರರ ಮುಂದೆ ನಸುನಗುತ್ತಿರುತ್ತಾರೆ...

ಅಪವಾದ

ಜೀವನದಲ್ಲಿ ಅಪವಾದಗಳೆಂಬುವು
ಒಳ್ಳೆಯವರನ್ನು ಕಾಡುತ್ತವೆ
ಕೆಡುಕರನ್ನೂ ಬೆಂಬಿಡದೆ ಹಿಂಬಾಲಿಸುತ್ತವೆ
ಆದರೆ
ಮೊದ ಮೊದಲಿಗೆ ಕೆಡುಕರಿಗೆ
ಜಯ ಸಿಕ್ಕಂತಾಗಿ ಸಂಭ್ರಮಪಟ್ಟರೂ
ಕೊನೆಯಲ್ಲಿ ಉಳಿದುಹೋಗುವುದು
ಸತ್ಯವೆಂಬ ಮೂಲಾಕ್ಷರಗಳು ಮಾತ್ರವೆ

Sunday, June 24, 2012

ಜ್ಞಾನವೆಂಬ ಶಿಲ್ಪ

ಜ್ಞಾನವೆಂಬ ಶಿಲ್ಪವನ್ನು ಸಿದ್ದಗೊಳಿಸಲು
ತಾಳ್ಮೆ, ಏಕಾಗ್ರತೆ, ಸಹನೆ, ಧಯೆ, ತ್ಯಾಗ,
ಪ್ರೀತಿ, ಕರುಣೆ, ನಿಸ್ವಾರ್ಥ ಮತ್ತು ಸಕಲ ಇಂದ್ರಿಯಗಳನ್ನು
ನಿಗ್ರಹಿಸುವಂತಹ ಉಳಿಪೆಟ್ಟಿನ ತೀಕ್ಷ್ಣವಾದ ಏಟು
ಬಹಳ ಮುಖ್ಯವಾಗಿ ಬೇಕಾಗುತ್ತದೆ.

Friday, June 22, 2012

ಮಹತ್ವ


ಹಸಿವಾದಾಗ ಅನ್ನದ ಮಹತ್ವ
ದಾಹವಾದಗ ನೀರಿನ ಮಹತ್ವ
ಕಳೆದುಕೊಂಡಾಗ ವಸ್ತುವಿನ ಮಹತ್ವ
ಕಸಿದುಕೊಂಡಾಗ ಪ್ರೀತಿಯ ಮಹತ್ವ
ದಿಕ್ಕುತಪ್ಪಿದಾಗ ದಾರಿಯ ಮಹತ್ವ
ಕಷ್ಟ ಬಂದಾಗ ದೈವ ಮಹತ್ವದ
ಅರ್ಥ ಅನರ್ಥಗಳು ಅರಿವಾಗುವುದು…

ಮೆಟ್ಟಿಲು

"ಇತರರನ್ನು ನಂಬುವ ಮೊದಲು ನಿಮ್ಮಲ್ಲಿ ನಿಮಗೆ ವಿಶ್ವಾಸ ವಿರಲಿ,,.
ಕೋಟಿ ಕಷ್ಟಗಳಿದ್ದರೂ ಗೆದ್ದೇ ತೀರುತ್ತೇನೆಂಬ ಛಲ ನಿಮ್ಮದಾಗಲಿ,,..
ನೋವು ನಲಿವುಗಳು ಪ್ರತಿಯೊಬ್ಬರ ಜೀವನದ ಮೆಟ್ಟಿಲುಗಳು,,..
ಪ್ರಯತ್ನ ಸ್ವಲ್ಪ ಶಮ್ರದಾಯಕವೇ ಆದರೂ,..
ಎಲ್ಲವನ್ನೂ ಹಿಮ್ಮೆಟ್ಟಿ ಮುಂದೆ ಹೊರಟಲ್ಲಿ,,,..
ಲೋಕವೇ ನಿಮ್ಮನ್ನು ಮುಕ್ತ ಕಂಠದಿಂದ ಪ್ರಶಂಸಿಸುತ್ತದೆ",,,..

Saturday, June 9, 2012

{ನುಡಿ} ಮುತ್ತು 28

ಧರ್ಮಕಾರ್ಯಕ್ಕಿದು ಕಾಲವಾಗಿಲ್ಲ
ಸತ್ಯದ ಹಾದಿಯೂ ನೆಟ್ಟಗೆ ಉಳಿದಿಲ್ಲ
ನಿಜದಿ ದೈವವೇ ಬಂದು
ಎದಿರು ನಿಂತೆನೆಂದರೂ
ನಂಬುವಂತ ಜನಯಾರಿಹರಯ್ಯಾ?
ಗೆದ್ದದ್ದು ಸಂಶಯವೋ!
ಅಹಂಭಾವದ ಮಹಾ ಪರ್ವವೋ!
ಭಲ್ಲವರ್ಯಾರುಂಟು ಮಲ್ಲಿಕಾರ್ಜುನ

Thursday, June 7, 2012

{ನುಡಿ} ಮುತ್ತು 27

ಕರ್ಮ ಕಂಟಕರಿಂದು
ನೆಮ್ಮದಿಯ ಪಠಿಸುತಿಹರು
ಧರ್ಮಾಂಧರೆಲ್ಲಾ
ಮುಡಿಯೇರಿ ಕುಳಿತಿಹರು
ಮೂಳೆ ಮಾಂಸದ ಮನವೇ
ದೈವವೆಂತಾದರೇ
ಇನ್ನೂ ದೈವವೆಂಬ ಭಾವಕ್ಕೆ
ಅರ್ಥವುಂಟಾ ಮಲ್ಲಿಕಾರ್ಜುನ?.

Tuesday, May 22, 2012

{ನುಡಿ} ಮುತ್ತು 26


ಗುಣವಿಲ್ಲದ ಕಂಟಕರು
ನೀತಿ ಮರೆತ ಲಂಪಟರು
ಕಾಯಕವನ್ನರಿಯದ ಅಧಮರು
ಜ್ಞಾನವೆಂಬ ಲೇಪವೇ ಇಲ್ಲದೆ ಮೂಡರು
ಸ್ತ್ರೀ ಸಂಗಕ್ಕಾಗಿ
ಆತೊರೆಯುವ ಕಾಮುಕರೂ
ಸಹ ಕಾವಿ ತೊಟ್ಟು
ಸಜ್ಜನಿಕೆಯ ಗುಣದಾನವ ಮಾಡುತಿರೆ
ಇನ್ನು ಲೋಕದ ಸ್ಥಿತಿಯೇನು ಮಲ್ಲಿಕಾರ್ಜುನ?

Monday, May 21, 2012

{ನುಡಿ} ಮುತ್ತು 25


ಬ್ರಾಹ್ಮಣನ ಮನೆಯಲ್ಲೂ ಅನ್ನ ಬೇಯುವುದು
ಕ್ಷತ್ರಿಯನ ಮನೆಯಲ್ಲೂ ಅನ್ನ ಬೇಯುವುದು
ವೈಶ್ಯನ ಮನೆಯಲ್ಲೂ ಅನ್ನ ಬೇಯುವುದು
ಹೊಲೆಯನ ಮನೆಯಲ್ಲೂ ಅನ್ನ ಬೇಯುವುದು
ಅನ್ನಕಿಲ್ಲದ ಕೀಳರಿಮೆ ಅನ್ಯರಿಗ್ಯಾಕೋ ನಾಕಾಣೆ
ಒಮ್ಮತದಿ ಉತ್ತರಿಸು ಮಲ್ಲಿಕಾರ್ಜುನ

Saturday, May 19, 2012

{ನುಡಿ} ಮುತ್ತು 24

ನಗುವನ್ನು ದುಡ್ಡುಕೊಟ್ಟು ಕೊಳ್ಳಲಾಗದು
ನೆಮ್ಮದಿಯನ್ನು ಹುಡುಕಿ ಪಡೆಯಲಾಗದು
ಸುಖವನ್ನು ಕಾಲುಮುರಿದು ಕೂರಿಸಲಾಗದು
ದುಗುಡವನ್ನು ಮನದೊಳಗೆ ಇಂಗಿಸಲಾಗದು
ಮೂಗಿರುವಷ್ಟು ಕಾಲ ನೆಗಡಿಯು ತಪ್ಪಿದ್ದಲ್ಲ
ಜೀವಿದ್ದಷ್ಟು ಕಾಲ ತೊಂದರೆಗಳಿಗೆ ಬರವಿಲ್ಲ
ತನ್ನಿರುವೊಳಗೆ ಇವುಗಳೆಲ್ಲವನ್ನು ಪ್ರಶ್ನಿಸುತ್ತ
ಉತ್ತರವ ಪಡೆಯೆನ್ನುತ್ತಾನೆ ಮಲ್ಲಿಕಾರ್ಜುನ

Friday, May 11, 2012

{ನುಡಿ} ಮುತ್ತು 23


ಜಾಲಿಯ ಗಿಡವೆಂದು 
ಜರಿಯದಿರಯ್ಯಾ ಮನುಜ
ಜಾಲಿಯ ಮರದಲ್ಲೂ 
ಜೇನು ಕಟ್ಟುವುದು 
ಅಭಾಗ್ಯರ ಜೀವನ
ಈ ಜಾಲಿಯ ಮುಳ್ಳಂತೆ 
ನೋಡುವವರ ಕಣ್ಣು
ವಿಶಾಲವಿರಬೇಕೆನ್ನುವ ಮಲ್ಲಿಕಾರ್ಜುನ

Monday, May 7, 2012

{ನುಡಿ} ಮುತ್ತು 22


ನನ್ನ ಈ ಸಾಲುಗಳಿಗೆ
ಗುರುವು ನಿನೆಯೋ ತಂದೆ
ಒಪ್ಪು ತಪ್ಪಗಳ ತಿದ್ದಿ
ಮುನ್ನಡೆಸು ದೇವ
ನಾ ಅಲ್ಪ ಅರಿವಿಲ್ಲ
ಅರಿತದ್ದ ಅರ್ಪಿಸುವೆ
ಇದಕ್ಕಿಂತ ಹಿರಿದೆನ್ನ ಬಳಿ
ನೀಡಲೇನಿಲ್ಲ ಮಲ್ಲಿಕಾರ್ಜುನ

Sunday, May 6, 2012

{ನುಡಿ} ಮುತ್ತು 21


ಭಯವೇ ಭಕ್ತಿಯ ಮೂಲ
ಭಯವಿಲ್ಲದೊಡೆ ಯಾವ ಕಾರ್ಯ ಸಿದ್ದಿಸದು
ಸಕಲ ಕಾರ್ಯಗಳನ್ನು
ಭಕ್ತಿಯಿಂದಲಿ ಮಾಡುತ
ವಿಜಯದಲಿ ಮುನ್ನಡೆವೆಂಬೆನು ಮಲ್ಲಿಕಾರ್ಜುನ

Saturday, May 5, 2012

{ನುಡಿ} ಮುತ್ತು 20

 
ನರಕವೆಂಬುದು ಎಲ್ಲೋ
ಯಮನ ಲೋಕದಲ್ಲಿಲ್ಲ
ನರಳಿ ಸಾಯುವವನಿಗೆ
ನರಕವೆಂಬುದು ಇಲ್ಲೆ
ಸ್ವರ್ಗವೆಂಬುದ ಜನ
ಕಂಡು - ಕೊಂಡಾಗಿದೆ
ಮತ್ತೊಂದು ಸ್ವರ್ಗವು
ಎಲ್ಲಿಹುದಯ್ಯಾ ಮಲ್ಲಿಕಾರ್ಜುನ

Friday, May 4, 2012

{ನುಡಿ} ಮುತ್ತು 19


ಹೆತ್ತ ತಾಯಿಯ ಮರೆತು
ಹೆಮ್ಮರಗಳ ಬಿಗಿದಪ್ಪಿರದೇನು ಫಲ
ಹುಂಡಿ ತುಂಬುವ ಧನವ
ಅವಳ ಸುಖಕ್ಕಾದರೂ ನೀಡು
ನಿನ್ನ ಪ್ರತಿ ಎತ್ತರಕ್ಕೂ
ಅವಳ ಹರಕೆಯೇ ಮೂಲ
ಪೂಜೆಯೆಂದಿದ್ದರೆ ಅದು
ಮಾತೆಗಯ್ಯಾ ಮಲ್ಲಿಕಾರ್ಜುನ

Thursday, May 3, 2012

{ನುಡಿ} ಮುತ್ತು 18


ಬೀಳುವ ಮಳೆಗೊಂದು
ಪೂಜೆಯ ನೆಪವೇಕೆ?
ಸಮಯ ತಾ ಬಂದಾಗ
ಬಿದ್ದೆ ಬೀಳುವುದು
ಹೋಮ ಹವನದಿ ಉರಿವ
ಬೆಂಕಿಯಲ್ಲಿ ಬೆಣ್ಣೆಯುಯ್ದರೆ
ಬೆಪ್ಪರೆಂದ್ನೆನ್ವನು ಮಲ್ಲಿಕಾರ್ಜುನ

Wednesday, May 2, 2012

{ನುಡಿ} ಮುತ್ತು 17


ಕಾಸಿಲ್ಲದೆ ಯಾರೂ
ಸುಡುಗಾಡ ತಲುಪಲಾಗದು
ಕಾಸಿನ ಉರುಳಿಗೆ
ಕೊರಳು ಕೊಟ್ಟಾಗಿದೆಯಲ್ಲ
ಕಿಟಕಿ ಬಾಗಿಲುಗಳು ಸಹ
ಕಾಸಿಲ್ಲದೆ ತೆರೆದುಕೊಳ್ಳುವುದಿಲ್ಲ
ಇನ್ನು ಗೋಡೆದೆ ಕಿವಿಯಿದ್ದು 
ಪ್ರಯೋಜನವೇನು ಮಲ್ಲಿಕಾರ್ಜುನ?

{ನುಡಿ} ಮುತ್ತು 16

ವಿಧಿಯ ಬರಹದ ಬಗ್ಗೆ
ಯೋಚಿಸುವ ಒಬ್ಬರನು ನಾಕಾಣೆ
ತಂತ್ರ ಕುತಂತ್ರಗಳ ಹೆಣೆಯುತ್ತಾ
ಜಾರಿ ಬೀಳುವ ಜನರಿಗಾಗಿ ಕಾದು ಕುಳಿತ
ಜೇಡಗಳನ್ನು ಶಿಕ್ಷಿಸುವುದೆಂತು ಮಲ್ಲಿಕಾರ್ಜುನ

{ನುಡಿ} ಮುತ್ತು 15

ಅಜ್ಞಾನದ ಕಿಚ್ಚಿಗೆ
ಸುಜ್ಞಾನವು ಬಲಿಯಾಗದಿರಲಿ
ದಾರಿ ನೆಟ್ಟಗಿದ್ದರೂ 
ಅದು ಸೊಟ್ಟಗೆ 
ಕಾಣುವಂತಾಗದಿರಲಿ ಮಲ್ಲಿಕಾರ್ಜುನ

{ನುಡಿ} ಮುತ್ತು 14


ನಿಜವಾದ ಮಾನವ ದೇಹದಲಿ
ಕಾಮವನ್ನು ಕಾಮವೇ ತಿಂದು
ಕ್ರೋದವನ್ನು ಕೋಪವೇ ತುಳಿದು
ಮಧವು ಮತಿಹೀನವಾಗಿ
ಮತ್ಸರವು ಮಂಕಾಗಿ
ಲೋಭವನು ಲಾಭವನಾಗಿಸಿಕೊಂಡು
ಮೋಹದೊಂದಿಗೆ ಎಲ್ಲ ಮರ್ಮಗಳೂ
ಮಸಣ ಸೇರುವಂತಾಗಲಿ ಮಲ್ಲಿಕಾರ್ಜುನ

{ನುಡಿ} ಮುತ್ತು 13

ಮನುಕುಲದ ಕಲ್ಮಶವನ್ನು ತೊಳೆಯಲು
ವಿಧಿಯೇ ಮುಂದೆ ಬಾರದಿದ್ದಾಗ ಅವರವರ
ನಂಜು ಅವರವರನ್ನೆ ಸರ್ವನಾಷವಾಗಿಸುವ
ಕಾಲ ದೂರವಿಲ್ಲ ಮಲ್ಲಿಕಾರ್ಜುನ

{ನುಡಿ} ಮುತ್ತು 12


ಹಿಂದೊಮ್ಮೆ ಕೊಳವಿತ್ತು
ಕಲಕಲಿಸುವ ಜಲವಿತ್ತು
ಹೆಂಗೆಳೆಯರ ಕಂಕುಳಲ್ಲಿ
ಕುಲುಕಾಡುವ ಬಿಂದಿಗೆಯಿತ್ತು
ಹಾದಿ ಬೀದಿಗಳ ಹುಡುಕುತಿಹೆ
ಎಲ್ಲಿಗೋದವೋ ಕಾಣೆ
ಇದು ಎಂಥಹ ಬದಲಾವಣೆಗೆ
ಕಾರಣವಯ್ಯ ಮಲ್ಲಿಕಾರ್ಜುನ?

Monday, April 30, 2012

{ನುಡಿ} ಮುತ್ತು 11


ಸೂರಿಲ್ಲ ನೀರಿಲ್ಲ ಕಾಳಿಲ್ಲ ನೆಲೆಯಿಲ್ಲ
ಮೊದಲು ನನ್ನನ್ನೊಳು ನಾನೇ ಇಲ್ಲ
ಇದಕ್ಕಿಂತ ಬರ ಮತ್ತೊಂದು ಉಂಟೇ?
ತನು ಶುದ್ಧಿಯಿಲ್ಲದೊಡೆ ಸ್ಥಾವರಕ್ಕೂ ಬರವುಂಟು
ಸಕಲ ಇಂದ್ರಿಯಗಳ ನಿಗ್ರಹಿಸೋ
ಶಕ್ತಿಯನ್ನಾದರೂ ನೀಡು ಮಲ್ಲಿಕಾರ್ಜುನ

Sunday, April 29, 2012

{ನುಡಿ} ಮುತ್ತು 10

ಬಿರುಕು ಮೂಡಿದ ನೆಲ
ಬಿರುಗಾಳಿಯಂತಲ್ಲ
ಒಲೆಯತ್ತಿ ಉರಿದರೆ
ಧರೆಯು ಉರಿದಂತೇನಲ್ಲ
ಒಳಮನಸ್ಸಿನ ತಾಪಕ್ಕಿಂತ
ಮತ್ತೊಂದು ಕಿಚ್ಚಿಲ್ಲ
ಶರಣಾಗು ಸಾವುದಾನದಿ
ಮಲ್ಲಿಕಾರ್ಜುನ ನೆನೆದು

Saturday, April 28, 2012

{ನುಡಿ} ಮುತ್ತು 9


ಘನವೆತ್ತ ಜನರನ್ ಅಯ್ಯಾ ಎಂಬುದೆ
ಘನವೆತ್ತ ಕುಲವನ್ ಅಯ್ಯಾ ಎಂಬುದೆ
ಘನವೆತ್ತ ದೈವವನ್ ಅಯ್ಯಾ ಎಂಬುದೆ
ಸಜ್ಜನಿಕೆಯ ಘನಕ್ಕಿಂತ ಮತ್ತೊಂದು ಘವವುಂಟೆ
ನೀನಾದರೂ ಹೇಳು ಮಲ್ಲಿಕಾರ್ಜುನ?